ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ರಾಮ ನಿನ್ನ ಬಾಣ ತಾಗಿದಾಮೇಲೆ..............

ಲೇಖಕರು :
ರಾಜ್ ಕುಮಾರ್
ಶುಕ್ರವಾರ, ನವ೦ಬರ್ 8 , 2013

''ರಾಮ ನಿನ್ನ ಬಾಣ ತಾಗಿದಾಮೇಲೆ ಬದುಕಬೇಕೆಂಬ ಅಶೆಯುಂಟೇ ಎನಗೇ? ''

ದರ್ಪದಿಂದಲೂ ದುರಹಂಕಾರದಿಂದಲೂ ಮೆರೆಯುತ್ತಿದ್ದ ವಾಲಿ ರಾಮ ಬಾಣದಿಂದ ಘಾಸಿಗೊಂಡು ಧರೆಗುರುಳಿದಾಮೇಲೆ, ಶಿಕ್ಷೆ ರಕ್ಷೆಗೆ ಬದ್ಢನಾದ ರಾಮನಲ್ಲಿ ಹೀಗೆ ಕೇಳುತ್ತಾನೆ. ಬಲಿಪ್ಪಜ್ಜನ ಪದವೂ ಶೇಣಿ ಅಜ್ಜನ ಅರ್ಥವೂ ಮೇಳವಿಸಿತೆಂದರೆ ಮತ್ತೆ ಕೇಳಬೇಕೆ?

''ಏನ ಮಾಡಲಿ ನಾನು ಇನ್ನೇನ ಕಂಡೆನು ಇಂದು.....'' ಕಡತೋಕರ ಪದವೂ ಪುತ್ತೂರು ಹೆಗಡೆಯ ಕಂಸವೂ ಉದಯ ಕಾಲದಲ್ಲಿ ಮೆರೆಯುವ ಪರಿಯೇ ಬೇರೆ.

ಕಂಸ ಎಂದಾಗ ಬಹಳ ಜನಜನಿತವಾದ ಮಾತು ಹಲವು ಸಲ ನೆನಪಿಗೆ ಬರುತ್ತದೆ. ಮಂಡೆಚ್ಚರ ಪದವೂ ಬೋಳಾರ ಶೆಟ್ಟಿಯವರ ಕಂಸವೂ..... ಆದರೆ ಇದು ನಾನು ಕಂಡಿರದೇ ಇರುವ ಸತ್ಯ. ಹಾಗಾಗಿ ಕಲ್ಮ ನೆ ಮಾತ್ರ.

ಹಾಗೇಯೇ-

'' ಕಂಡನೋ ದಶವದನ ಕೋದಂಡ ರಾಮನ ......'' ರಾವಣ ಮೋಕ್ಷದ ಸನ್ನಿವೇಶ.

ಇವುಗಳನ್ನು ಕೇಳಿದಾಗಲೇ ಯಕ್ಷಲೋಕದ ನಾಭೀಸ್ಪರ್ಶವಾದ ಅನುಭವವಾಗುವುದಿಲ್ಲವೇ?

'ವಾಲಿವಧೆ'ಯ ಒ೦ದು ದೃಶ್ಯ
ಯಕ್ಷಗಾನದ ಪುರಾಣ ಪ್ರಸಂಗಗಳಲ್ಲಿ ಬಹಳಷ್ಟು ಮೇಲೆ ಹೇಳಿದ ಸನ್ನಿವೇಶಗಳು ಪ್ರಸಂಗದ ಕೊನೆಯ ಹಂತದಲ್ಲಿ ವಿಜ್ರಂಭಿಸಲ್ಪಡುತ್ತದೆ. ಇಲ್ಲಿ ಪಾರಮಾರ್ಥಿಕ ಸತ್ಯ ಏನು ಎಂದು ಸರಳವಾಗಿ ವರ್ಣಿಸಲ್ಪಡುತ್ತದೆ. ಉರ ಪ್ರದೇಶದಲ್ಲಿ ರಾಮ ಬಾಣ ನೆಟ್ಟನೆಂದ ಮೇಲೆ ಆ ರಾಮನ ಉದ್ದೇಶವಾದರೂ ಏನು? ತನ್ನ ನಿಯಂತ್ರಣದಲ್ಲಿ ಎಲ್ಲವನ್ನು ಅಡಗಿಸಬಲ್ಲೆ ಎಂಬ ಅಹಂಕಾರದಿಂದ, ಕೊರೆ ಕೊರೆದು ಮುಂದೊತ್ತುವ ಸಜೀವ ಶರವನ್ನು ತಾನು ನಿಯಂತ್ರಿಸಿದ್ದೇನೆ ಎಂಬ ಭ್ರಮಾಧೀನನಾದ ವಾಲಿಯ ಭ್ರಮೆಯನ್ನು ಅಲ್ಲಿ ಕಳಿಚಿ ಬಿಡುತ್ತಾನೆ ರಾಮ. ರಾಮಬಾಣ ಬೇರೆ ಯಾರಿಂದಲೂ ನಿಯಂತ್ರಿಸಲಾಗದ ಸತ್ಯ ಅರಿತಾಗ ವಾಲಿಯ ಚಿಂತನೆಯ ದಿಶೆಯೇ ಬದಲಾಗಿಬಿಡುತ್ತದೆ. ರಾಮನಿಂದ ಶಿಕ್ಷಿಸಲ್ಪಡಬೇಕಾದ ಕಾಯವಿದು, ಎಂಬ ರಾಮ ಸಂಕಲ್ಪ ಬಂದಾದ ಮೇಲೆ ಈ ಕಾಯದ ಮೇಲಿನ ಬಯಕೆಯೇ ನಶಿಸಿ ಹೋಗುತ್ತದೆ. ತಾನು ಏನು ತನ್ನ ಪಾತ್ರದ ಅರಿವೇನು ಎಂದು ವಾಲಿ ಅರಿತಾಗುತ್ತದೆ. ಮೋಕ್ಷಗಾಮಿಯಾಗುವ ವಾಲಿಗೆ ಶರೀರ ಘಾಸಿಯಾಗುವುದು ಹೊಸತೇನಲ್ಲ. ಆದರೆ ರಾಮನಿಂದ ಘಾಸಿಯಾಯಿತಲ್ಲ? ರಾಮನಿಗೆ ಈ ಶರೀರ ಬೇಡವೆಂದು ಕಂಡು ಯಾವಾಗ ಆತನಿಂದ ಘಾಸಿಗೊಂಡಿತೋ ಶರೀರದ ಮೇಲಿನ ಮಮಕಾರ ಹೊರಟುಹೋಗುತ್ತದೆ.

ಕಂಸನ ಚಿತ್ರಣವೂ ಹಾಗೆ, ಮರುದಿನ ಶ್ರೀಕೃಷ್ಣನ ದರ್ಶನವಾಗುತ್ತದೆ ಎಂಬ ಭಯದಲ್ಲೇ ಮೊದಲ ರಾತ್ರಿಯ ನಿದ್ರೆಯನ್ನು ಕಳೆದುಕೊಂಡು ಬಿಡುತ್ತಾನೆ ಕಂಸ. ತನ್ನ ಜನ್ಮ ಜನ್ಮಾಂತರದ ಅರಿವಾಗಿ ಎಲ್ಲಿ ನೋಡಿದರಲ್ಲಿ ಶ್ರೀಕೃಷ್ಣನೇ ಆ ಇರುಳಲ್ಲಿ ಕಂಡುಬರುತ್ತಾನೆ. ಕೆದರಿದ ತಲೆ, ಭಯದಿಂದ ಅರಳಿದ ಕಣ್ಣು.. ರಂಗಸ್ಥಳದ ತುಂಬಾ ಆವರಿಸುವ ಕಂಸ ಎಂತಹ ಭಯಾನಕ ದೃಶ್ಯವದು. ಸುತ್ತಲೂ ನಿಶ್ಯಬ್ಧ ಸಭಾವಲಯ, ಏರು ಸ್ಥಾಯಿಯಲ್ಲಿ ಭಾಗವತರು ಭಾವತುಂಬುತ್ತಿದ್ದರೆ ಮುನ್ನೆಲೆಯ ಕಂಸನ ಚೀತ್ಕಾರ ಸುತ್ತಲೂ ಮೊಳಗುವಾಗ...ಕಂಸನ ಅಸಹನೀಯ ವೇದನೆ ಅಭಿವ್ಯಕ್ತಿಸಲ್ಪಡುವುದನ್ನು ನೋಡಿದ ಪ್ರೇಕ್ಷಕ ಗಡಣ ಕಂಪಿಸುತ್ತದೆ. ಕಂಸ ಪಾರಮಾರ್ಥಿಕವಾಗಿ ಚಿಂತಿಸತೊಡಗುವುದನ್ನು ಗಾಬರಿಯಿಂದ ಕಾಣುತ್ತದೆ.

ಹಲವು ಅಸುರೀ ಪಾತ್ರಗಳು ಕೊನೆಯ ಹಂತದವರೆಗೂ ಭೀಭತ್ಸ ಮಯವಾಗಿ ವಿಜ್ರಂಭಿಸುತ್ತದೆ. ಅದು ರಾವಣ ಅಗಿರ್ಬಹುದು, ಕಂಸ ಆಗಿರಬಹುದು, ಶೂರ ಪದ್ಮನಾಗಿರಬಹುದು...ಕಾರ್ತವೀರ್ಯನಾಗಿರಬಹುದು ಕೊನೆಯ ಹಂತದಲ್ಲಿ ತಮ್ಮ ಅಸ್ತಿತ್ವದ ಸತ್ಯದ ಅರಿವಾಗಿ ಮೋಕ್ಷಮುಖರಾಗುವ ಪರಿ ಯಕ್ಷಗಾನದಲ್ಲಿ ಸುಂದರವಾಗಿ ವರ್ಣಿಸಲ್ಪಡುತ್ತದೆ. ಅತ್ಯಂತ ಸರಳವಾಗಿ ಮತ್ತು ಸುಲಭವಾಗಿ ಇಲ್ಲಿ ಕಂಡಾಗ ಮನುಷ್ಯ ಬದುಕಿನ ವಾಸ್ತವದ ದರ್ಶನವಾಗುತ್ತದೆ. ಈ ಮನುಷ್ಯ ಜನ್ಮದ ನಿಯಮವೇನು? ಭಗವಂತನ ನಿಯತಿಯೇನು? ಮೋಕ್ಷ ಎಂದರೇನು? ಸುಲಭವಾಗಿ ಇಲ್ಲಿ ಲಭ್ಯವಾಗುವ ಜ್ಞಾನ ಯಕ್ಷಗಾನದ ವೈಶಿಷ್ಟ್ಯಗಳಲ್ಲಿ ಒಂದು. ಬದುಕಿನ ಸತ್ಯ ತಿಳಿಯುವುದಕ್ಕೆ ವಿದ್ಯಾವಂತನೇ ಆಗಬೇಕೆಂದೇನೂ ಇಲ್ಲವೆಂಬ ಸತ್ಯವನ್ನು ಹಲವು ಯಕ್ಷಗಾನ ಕಲಾವಿದರು ರಂಗದ ಮೇಲೆ ತೋರಿಸಿದ್ದರೆ. ವಿದ್ಯೆ ಅಂತ ಇಲ್ಲಿ ಉಲ್ಲೇಖಿಸುವುದು ಲೌಕಿಕ ಪ್ರಪಂಚದಲ್ಲಿ ಬಿಂಬಿಸಲ್ಪಡುವ ವಿದ್ಯೆಯನ್ನು. ಆದರೆ ವಿದ್ಯೆಯ ಪರಿಧಿಗೆ ಇಲ್ಲಿ ಎಲ್ಲವೂ ಒಳಪಡುತ್ತದೆ ಎಂಬ ಸತ್ಯದ ಅರಿವಾಗುವುದು ಯಕ್ಷಗಾನ ಕಲಾವಿದನ ನೈಪುಣ್ಯತೆಗೆ ಸಾಕ್ಷಿ. ಕಲಾವಿದ ಇಲ್ಲಿ ಎಲ್ಲವೂ ತಿಳಿದ ಜ್ಞಾನಿಯಂತಾಗುತ್ತಾನೆ. ''ಮೋಕ್ಷ'' ಎಂದರೇನು? ಜನ್ಮ ಜನ್ಮಾಂತರದ ಈ ಜೀವ ಭಾವದ ಸಂಭಂಧಗಳೇನು? ಒಬ್ಬ ಯಕ್ಷಗಾನ ಕಲಾವಿದ ರಂಗ ಮೇಲೆ ಇದನ್ನು ಅಭಿವ್ಯಕ್ತಿಸುವಾಗ ಬಹಳ ಆಶ್ಚರ್ಯವಾಗುತ್ತದೆ. '' ರಾಮ ನಿನ್ನ ಬಾಣ ತಾಗಿದಾ ಮೇಲೆ....'' ಶೇಣಿ ಅಜ್ಜ ಒಂದು ಗಂಟೆ ಬೇಕಾದರೂ ವಿವರಣೆ ನೀಡ ಬಲ್ಲರು. ಯಕ್ಷಗಾನದ ನಿಜ ವೈಭವ ಇರುವುದೇ ಇಂಥವುಗಳಲ್ಲಿ. ಇಲ್ಲಿ ಪಂಡಿತ ಪಾಮರ ಎಂಬ ಭೇದವಿಲ್ಲ. ಯಾವುದೇ ಗುರುಕುಲದಲ್ಲಿ ಸಿದ್ದಿಸದ ಜ್ಜಾನ, ಪುಸ್ತಕಗಳನ್ನ ಓದದೇ, ಗುರುಗಳ ಪಾಠ ಕೇಳದೇ ಇಲ್ಲಿ ಸುಲಭದಲ್ಲಿ ಆರ್ಜಿಸಲ್ಪಡುತ್ತದೆ. ಯಕ್ಷಗಾನ ಸತ್ವಯುತ ಕಲೆ ಅನ್ನಿಸುವುದು ಇಂಥ ವಿಚಾರಗಳಲ್ಲೇ.

ಪೆರ್ಲ ಕೃಷ್ಣ ಭಟ್
ಕುರುಕ್ಷೇತ್ರದಲ್ಲಿ ಬಂಧುವರ್ಗದವರನ್ನು ಕೊಲ್ಲಲಾರೆ ಎಂದು ಅರ್ಜುನ ವ್ಯಾಮೋಹಕ್ಕೆ ಒಳಗಾದಾಗ ಶ್ರೀಕೃಷ್ಣ ಪಾರ್ಥನ ಮೋಹ ನಷ್ಟವಾಗುವಂತೆ ಪ್ರೇರೇಪಿಸುವ ಸನ್ನಿವೇಶವಿದೆ. ಗೀತೋಪದೇಶ ತಾಳ ಮದ್ದಲೆ ಪ್ರಸಂಗವೊಂದರಲ್ಲಿ ನಾನು ಎಂಬುದಕ್ಕೆ ಸುಲಭವಾದ ವಿಶ್ಲೇಷಣೆಯನ್ನು ಶೇಣಿ – ಪೆರ್ಲರ ಸಂವಾದ ಒದಗಿಸುತ್ತದೆ. ಸುಮಾರು ಮೂರು ಘಂಟೆಯ ಈ ತಾಳ ಮದ್ದಲೆ ಭಗವದೀತೆಯ ಪಾರಮಾರ್ಥಿಕತೆಯ ಜ್ಞಾನವನ್ನು ಒದಗಿಸುವ ಪರಿ ಹೀಗಿದೆ.

''ಅರ್ಜುನ ಕೊಲ್ಲುವುದು ಮತ್ತು ಕೊಲ್ಲಲ್ಪಡುವುದು. ಇದು ಎರಡೇ ವಿಷಯ ಇಲ್ಲಿ. ನೀನು ಕೊಲ್ಲುವುದು. ಅವರು ಕೊಲ್ಲಲ್ಪಡುವುದು, ನಿನ್ನಿಂದ. ಕೊಲ್ಲುವುದು ಯಾರು?''

''ನಾನು.''

''ಈ ನಾನು ಅಂದ್ರೆ ಏನು?''

''ನಾನಂದ್ರೆ ನಾನೇ, ಅರ್ಜುನ''

''ಹಾಗಾದ್ರೆ ಕೊಲ್ಲಲ್ಪಡುವುದು ಯಾರು? ಅವರು... ಅಂತ ನೀನು ಹೇಳಕೂಡದು. ಅವರೂ ಹೇಳ್ಬೇಕು. ಕೊಲ್ಲಲ್ಪಡುವುದು ಯಾರು? ಸಾಯಲ್ಪಡುವುದು ನಾನು. ನಾವು ಅಂತಲೂ ಹೇಳಬಾರದು. ನಾನು ಎಂಬುದು ವ್ಯಕ್ತಿಯಾಗಿ ಒಬ್ಬನ ಸ್ವಗತ ಅಲ್ವೋ? ನಿನ್ನನ್ನು ನೀನು ’ ನಾನು’ ಅಂತ ಹೇಳ್ತಿ. ನನ್ನನ್ನು ..??''

''ಅದಕ್ಕೆ ಅದನ್ನು ಸರ್ವನಾಮ ಅಂತ ಹೇಳುವುದು.ಎಲ್ಲರಿಗೂ ನಾನು ಅಂತ ಉಂಟು. ಆದರೆ ನಾನು ಅಂತ ಪ್ರತ್ಯೇಕ ಯಾರೂ ಇಲ್ಲ.''

ಮುಂದೆ ವಿವರಿಸುತ್ತಾ ಕೃಷ್ಣನಾಗಿ ಶೇಣಿ ಹೇಳುತ್ತಾರೆ, ಪ್ರತಿಯೊಬ್ಬರಲ್ಲಿಯೂ ಇದ್ದ ನಾನು, ಈ ಭೀಷ್ಮ, ದ್ರೋಣ ಹೀಗೆ ಪ್ರತಿಯೊಬ್ಬರಲ್ಲಿಯೂ ಇದ್ದ ನಾನು, ಅವರೂ ಸ್ವಕೀಯವಾಗಿ ಹೇಳುವಾಗ ನಾನು ಅಂತ ಹೇಳ್ತಾರೆ.

ಕೊಲ್ಲುವುದು ಯಾರುಂತ ಆಯ್ತು? ಉತ್ತರ '' ನಾನು''

ಸಾಯುವುದು ಯಾರೂಂತ ಆಯ್ತು ಉತ್ತರ ''ನಾನು''

ಆಗ ಅರ್ಜುನನಾಗಿ ಪೆರ್ಲ ಹೇಳುತ್ತಾರೆ. ಬಹಳ ಸರಳವಾದ ಸಂಭಾಷಣೆ ಇದು.

''ಇದುವರೆಗೆ ನೀನು ಯಾರು ಅಂದ್ರೆ ಯಾರಾದರು ಕೇಳಿದರೆ. ನಾನು ಅಂದರೆ ಪಾಂಡು ಚಕ್ರವರ್ತಿಯ ಪುತ್ರ, ಅರ್ಜುನ, ಈಗ ಅಲೋಚನೆ ಮಾಡುವಾಗ ನಾನು ಅಂದ್ರೆ ಯಾರು? ನಾನು ಅಂದ್ರೆ ಅರ್ಜುನ. ಹಾಗಾದ್ರೆ ಈಗ ನನ್ನ ಶರೀರ ಅಂತ ಹೇಳ್ತೇನೆ ..ನನ್ನ ಶರೀರ ಅಂತ ಹೇಳುವಾಗ ಶರೀರ ಬೇರೆ ನಾನು ಬೇರೆ ಅಂತ ಆಗುದಿಲ್ವ? ಇದು ನನ್ನ ಮನೆ ಅಂದ್ರೆ ನಾನು ಬೇರೆ ಮನೆ ಬೇರೆ. ಹಾಗೆ ಪ್ರತಿಯೊಂದು...ಹಾಗೇ ನನ್ನ ಅಂತ ಹೇಳುವಾಗ ನಾನು ಅಂತ ಬೇರೆ ಉಂಟು ಅಂತ ಆಯ್ತು. ಹಾಗೆ ನನ್ನ ಬುದ್ದಿ, ನನ್ನ ಮನಸ್ಸು, ನನ್ನ ಭಾವ..ಇದನ್ನೆಲ್ಲ ಹೇಳುತ್ತಾ ನನ್ನ ಕೈ ನನ್ನ ಕಾಲು, ನನ್ನ ಕೊರಳು, ನನ್ನ ತಲೆ, ಹೀಗೆ ಒಂದೊಂದನ್ನೆ ಹಾಗೆ ಬೇರೆ ಬೇರೆ ತೆಗೆದು ಇಟ್ಟರೆ,,,ಕೊನೇಗೆ ನಾನು ಎಂದು ಏನು ಉಳೀತದೆ?''

'' ಆವಾಗ ಅದು ಷಷ್ಠೀ ವಿಭಕ್ತಿಯಾಗಿ ಉಳೀತದೆ '' ನನ್ನದು...'' ಅಲ್ಲಿ ನಾನು ಇರುವುದೇ ಇಲ್ಲ...ನನ್ನದು ನಾನಲ್ಲದೇ ಹೋಗ್ತದೆ.''

''ಕೆಲವೊಮ್ಮೆ ಹೇಳುವುದುಂಟು ನಾನು ಅಂದ್ರೆ ನನ್ನ ಜೀವ ಅಂತ ಬೇರೆ ಉಂಟು. ನನ್ನ ಜೀವ ಹೋಗ್ತದೆ... ಆಗ ನಾನು ಬೇರೆ, ಜೀವ ಬೇರೆ...ಹಾಗಾದರೆ ನಾನು..?? ಎಲ್ಲ ತೊಡಕು ಎಲ್ಲ ತೊಡಕು. ''

ಆಗ ಕೃಷ್ಣ ..

'' ತೊಡಕು ಏನೂ ಇಲ್ಲ. ಆ ತೊಡಕು ಬಂದ ಮೇಲೆಯೇ ಇವನಿಗೆ ಉದ್ದಾರದ ದಾರಿ ದೊರಕುವುದು. ಆ ತೊಡಕು ಬಾರದೆಯೇ ಇವರೆಲ್ಲ ಈಗ ಆಯುಧ ಹಿಡಕೊಂಡು ಬಂದಿರುವುದು. ನನ್ನದು ಎಂಬುದು ನಾನಲ್ಲ ಎಂದು ತಿಳಿದರೆ..? ನನ್ನದು ಎಂಬ ಭಾವವನ್ನು ನಾಶ ಮಾಡುವುದಿದ್ದರೆ ಯಾರು ಅದು ನಾನು..,, ನಾನು ಎಂಬುದು ನನ್ನದು ಎಂಬುದನ್ನು ನಾಶ ಮಾಡಿದರೆ ನನ್ನನ್ನು ನಾಶ ಮಾಡಿದ ಹಾಗೆ ಆಗುತ್ತದೋ?

ತಾಳಮದ್ದಳೆಯೊ೦ದರಲ್ಲಿ ಶ್ರೀ ಶೇಣಿ ಗೋಪಲಕೃಷ್ಣ ಭಟ್.
ಇಂತಹ ಸುಲಭ ವೇದಾಂತ ಸರಳವಾಗಿ ಇಲ್ಲಿ ಈ ಯಕ್ಷಗಾನದಲ್ಲಿ ಸಿಗುತ್ತದೆ. ಯಕ್ಷಗಾನ ಹವ್ಯಾಸದಿಂದ ಯಾವುದೇ ಗ್ರಂಥ ಪಾರಾಯಣ ಇಲ್ಲದೇನೆ ಹಲವಾರು ವಿಷಯ ವಿಸ್ಮಯಗಳನ್ನು ಸ್ವತಃ ನಾನು ಅರಿತಿದ್ದೇನೆ. ಯಕ್ಷಗಾನ ಸರಳವಾಗಿ ಕೊಡುವ ಜ್ಞಾನವನ್ನೇ ಅರಗಿಸಿಕೊಂಡರೂ ನಮ್ಮ ಬದುಕೇನು? ಇದರ ಅರ್ಥವೇನು ಎಂದು ತಿಳಿಯುವುದಕ್ಕಾಗುತ್ತದೆ. ಆದರೂ ಕುರುಡುತನ ನಮ್ಮನ್ನು ಬಿಡುವುದಿಲ್ಲ ಆವರಿಸಿದ ಮೌಢ್ಯ ಕಳಚುವುದೇ ಇಲ್ಲ. ಹಲವು ಸಲ ಖೇದವಾಗುವಂತಹುದು, ಪದೇ ಪದೇ ಸಂಭವಿಸುತ್ತದೆ. ಜ್ಞಾನಕ್ಕೆ ಗ್ರಹಣ ಬಡಿದಂತೆ ಅನ್ನಿಸುತ್ತದೆ. ಹೊಸತಾದ ಅಂಗಿ ತೊಟ್ಟಮೇಲೆ ಒಳಗಿನ ಬನಿಯನು ಹರಿದಿರುವುದು ಗಮನಕ್ಕೇ ಬರುವುದಿಲ್ಲ. ಸ್ವಪ್ರತಿಷ್ಠೆಯ ಸ್ವಾರ್ಥ ಕಂಡಾಗ ಬೆಳಕೆಂದರೆ ಸಿಡಿಮದ್ದಿನ ಬೆಳಕಿನಂತೆ ಅದು ಕ್ಷಣಿಕವೇ ಎಂಬ ಭ್ರಮೆ ಆವರಿಸುತ್ತದೆ. ಕಾರಣ ನಮ್ಮಲ್ಲಿ ಆವರಿಸಿರುವ ಸ್ವಪ್ರತಿಷ್ಠೆಯ ಸ್ವಾರ್ಥ.

ರಾಮ ನಿನ್ನ ಬಾಣ ತಾಗಿದಾ ಮೇಲಿನ ಪಾರಮಾರ್ಥಿಕದ ಬಗ್ಗೆ ಹೇಳುವಾಗ, ರಂಗದ ಮೇಲೆ ಮೋಕ್ಷ ಸಾಧನೆಯ ಮಾತನ್ನಾಡುವಾಗ ಒಂದು ಕ್ಷಣವಾದರೂ ಈ ಜೀವಭಾವದ ಸಂಭಂಧದ ಅರಿವಾಗದದಿರುತ್ತದೆಯೆ? ಮನುಷ್ಯನ ಹುಟ್ಟು ಸಾವಿನ ನಡುವಿನ ನಶ್ವರ ಜೀವನದ ಅರ್ಥವೇನು ಎಂದರಿವಾಗಿರುತ್ತದೆ. ಒಂದು ವೇಳೆ ಇದರ ಅರಿವಾಗದೇ ಇದ್ದರೆ, ಕಲಾವಿದನಾಗಿ ವಾಲಿಯಾಗಿ ಪರಕಾಯ ಪ್ರವೇಶ ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಪರಿ ಪೂರ್ಣ ವಾಲಿಯ ಪಾತ್ರವೂ ಅಗುವುದಕ್ಕೆ ಸಾಧ್ಯವಿಲ್ಲ. ರಂಗದ ಮೇಲಿನ ವಾಲಿಯ ಮಾತಿಗೆ ನಾವು ಆಸನದ ತುದಿಗೆ ಬಂದು , ಕಣ್ಣು ತುಂಬಿ ಭಾವಪರವಶರಾಗಿ ಚಪ್ಪಾಳೆ ಹೊಡೆಯುತ್ತೇವೆ. ಭಾಗವತರು ಮಂಗಳ ಹಾಡಿದಾಗ ನಮ್ಮ ಭಾವನೆಗಳಿಗೂ ಮಂಗಳ ಹಾಡಿಬಿಡುತ್ತೇವೆ. ಮತ್ತೆ ಯಥಾ ಪ್ರಕಾರ ರಾಗದ್ವೇಷದ ಪ್ರಪಂಚದ ಒಳ ಹೊಕ್ಕು ಸಾಮನ್ಯರೇ ಆಗಿಬಿಡುತ್ತೇವೆ. ಇದಲ್ಲವೇ ವಿಪರ್ಯಾಸ? ಜಗತ್ತು ವಿಪರ್ಯಾಸಮಯ ಎನ್ನುವುದು ಹೀಗೆನೆ.

ಹಲವು ಸಲ ಅನ್ನಿಸುತ್ತದೆ ಯಕ್ಷಗಾನ ಆಶ್ರಯ, ಪ್ರೋತ್ಸಾಹವಿಲ್ಲದೆ ಬಡವಾಗುವುದಿಲ್ಲ. ಅದು ಕೇವಲ ಸ್ವ- ಪ್ರತಿಷ್ಠೆಯಿಂದ ಅನಾಥವಾಗುತ್ತದೆ . ಸ್ವಪ್ರತಿಷ್ಠೆ ಸ್ವಾರ್ಥಕ್ಕೇ ಪ್ರೇರಣೆಯಾಗುತ್ತದೆ. ಸ್ವಾರ್ಥ ರಾಜಕಿಯಕ್ಕೆ ಹಾದಿ ಹುಡುಕುತ್ತದೆ. ಕಲಾವಿದನಾಗಲೀ ಪ್ರೇಕ್ಷಕನಾಗಲೀ ಇದರಿಂದ ಮುಕ್ತವಾಗಿ ಚಿಂತಿಸದೇ ಇರುವುದು, ಕೆಲವೊಮ್ಮೆ ಈ ಚಿಂತನೆಗಳೆಲ್ಲ ಬಾಲಿಶಮಯವಾಗಿ ತೋರುವುದು ಮೇಲೆ ಹೇಳಿದ ಪಾತ್ರಗಳ ಸಂಪೂರ್ಣ ಪಾರಾಮರ್ಥಿಕ ಚಿತ್ರಣ ಸಾಕ್ಷಾತ್ಕಾರವಾದಾಗ. ಸ್ವಾರ್ಥ ಸ್ವ ಪ್ರತಿಷ್ಠೆಯನ್ನು ಬಿಟ್ಟವನು ನೆಮ್ಮದಿಯಾಗಿ ಇರಬಲ್ಲ. ಯಕ್ಷಗಾನದಂತಹ ಕಲೆ ಅದು ಸಮನ್ವಯ ಕಲೆ. ಇಲ್ಲಿ ಒಂದು ಎಂದು ಪ್ರತ್ಯೇಕಿಸುವುದಕ್ಕಿಲ್ಲ. ಸಮಷ್ಟಿಯ ಕಲೆ. ಇದು ಲಘೂಪಹಾರವಲ್ಲ. ಲಘೂಪಹಾರದಲ್ಲಿ ಒಂದು ತುಂಡು ಆಹಾರ ಕೊಟ್ಟರೂ ಅದು ಅರ್ಥ ಕಳೆದುಕೊಳ್ಳುವುದಿಲ್ಲ. ಆದರೆ ಷಡ್ರಸ ಭೋಜನ ಇಲ್ಲಿ ಸಿಹಿ ಕಹಿ ಚೊಗರು ಎಲ್ಲವೂ ಹಿತವಾಗಿ ಜತೆಯಾದರೆ ಮಾತ್ರ ಷಡ್ರಸ ಅರ್ಥವನ್ನು ಕಂಡುಕೊಳ್ಳುತ್ತದೆ. ಆ ಮಟ್ಟಿಗೆ ಯಕ್ಷಗಾನ ಷಡ್ರಸ ಭೋಜನಕ್ಕೆ ಹೋಲಿಸುತ್ತಾರೆ. ಚಿಟಿಕೆ ಉಪ್ಪಾದರೂ ಅದರ ಮಹತ್ವಕ್ಕೆ ಇನ್ನೊಂದು ಅನ್ವಯವಾಗುವುದಿಲ್ಲ. ಅದರ ಅವಶ್ಯಕತೆಯನ್ನು ಇನ್ನೊಂದು ನಿಭಾಯಿಸಿದರೆ ಅದು ಅಭಾಸವಾಗುತ್ತದೆ. ಹಾಗಾಗಿ ಚಕ್ರತಾಳ ಹಿಡಿವವನೂ ರಂಗಸ್ಥಳದ ಪೂರಕ ಅಂಗವಾಗಿರುತ್ತಾನೆ.

ಸೂರಿಕುಮೇರು ಗೋವಿ೦ದ ಭಟ್
ಹಿರಿಯ ಕಲಾವಿದ ಗೋವಿಂದಣ್ಣನನ್ನು ತಾಳ ಮದ್ದಲೆಗೆ ಕರೆದಾಗ ಅವರು ತನ್ನ ಪಾತ್ರವೇನೆಂದು ಕೇಳುವುದಿಲ್ಲ. ಪ್ರಸಂಗವನ್ನೂ ಕೇಳುವುದಿಲ್ಲ. ಸಹಕಲಾವಿದರ ವಿವರವನ್ನು ಕೇಳುವುದಿಲ್ಲ. ಪಾತ್ರವನ್ನು ಪ್ರಸಂಗವನ್ನು ಬಂದನಂತರ ಹೇಳಿದರೂ ಆದೀತು ಅಂತ ವಿನಮ್ರವಾಗಿ ಹೇಳುವಾಗ ರಾಜಕಿಯದ ಮುಖವೇ ಕಪ್ಪಾಗುತ್ತದೆ ಹೊರತು ಸತ್ವಯುತ ಹಿರಿತನ ಮತ್ತೂ ಬೆಳಗುತ್ತದೆ.

ಯಕ್ಷಗಾನದಲ್ಲಿ ಪ್ರತಿಯೊಂದು ಅಂಗವೂ ಪೂರಕ. ರಂಗದ ಮೇಲಿನ ಮಂದಿ ಒಂದು ಕುಟುಂಬವಾದರೆ ರಂಗದ ಎದುರಿನ ಮತ್ತೊಂದು ಸಹ ಕುಟುಂಬ. ಸಮಷ್ಟಿಯಲ್ಲಿ ಒಂದು ಪಂಗಡ. ಇಲ್ಲಿ ಒಂದರ ಪ್ರಜ್ಞೆಗೆ ಊನ ಬಂದರೂ ನೋವು ಮೂಲ ಕಲೆಗೆ. ನಗರದ ಒಂದು ಬೀದಿಯಲ್ಲಿ ಸಾಲು ಸಾಲಾಗಿ ಮನೆಗಳಿರುತ್ತವೆ. ಪ್ರತಿ ಮನೆಯವರ ಅಂಗಳ ಎದುರು ಹಾಸಿದ ಸಾಮಾನ್ಯ ಬೀದಿಯೇ ಆಗಿರುತ್ತದೆ. ತಮ್ಮ ಮನೆಯ ಅಂಗಳ ಶುಚಿಯಾಗಿಸಿದಾಗ ಒಂದು ತುದಿಯಿಂದ ಇನ್ನೊಂದು ತುದಿಯವರೆಗಿನ ಬೀದಿಯೇ ಶುಚಿಯಾದಂತೆ. ತಮ್ಮ ಭಾಗದ ಕೆಲಸ ಪರಿಪೂರ್ಣವಾಗಿಸುವುದು. ಹೃದಯ ವೈಶಾಲ್ಯವಿದ್ದರೆ ಪಕ್ಕದ ಮನೆಯ ಅಂಗಳವನ್ನೂ ಶುಚಿಯಾಗಿಸಬಹುದು. ಅದು ಸಹಬಾಳ್ವೆಯ ಪ್ರತೀಕವಾಗಿ ಬೀದಿಯಂತೂ ಸುಂದರವಾಗಿಬಿಡುತ್ತದೆ. ಆದರೆ ಇಂತಹ ಉದಾತ್ತ ಸರಳ ತತ್ವಗಳನ್ನು ಅರಗಿಸಿಕೊಳ್ಳುವುದಕ್ಕೆ ಸ್ವ ಪ್ರತಿಷ್ಠೆ ಬಿಡುವುದಿಲ್ಲ. ಯಾವೂದೂ ಇಲ್ಲದಿದ್ದರೆ ಭುಜಬಲದಿಂದಲಾದರೂ ದಮನಿಸಿ ನಿಯಂತ್ರಿಸುವ ಅತಿಕ್ರಮಣ ಭಾವ. ಮಕ್ಕಳಲ್ಲಿ ಯಾರಿಗೆ ಪೆಟ್ಟು ಬಿದ್ದರೂ ಹೆತ್ತ ಕರುಳಿಗೆ ಅಲ್ಲವೇ ನೋವುಂಟಾಗುವುದು. ಕೈಹಿಡಿದ ಗಂಡ ಮತಿಭ್ರಮಿಸಿ ಹೊಡೆದರೂ, ಅಥವಾ ಇನ್ನಾರೂ ದಮನಿಸಿದರೂ ಹೆತ್ತ ಕರುಳು ಅನುಭವಿಸುವ ನೋವು ಗಾಢವಾಗಿರುತ್ತದೆ. ದೇಹ ಬಲದಿಂದ ಏನನ್ನಾದರೂ ನಿಯಂತ್ರಿಸಬಹುದೆಂದು ಭಾವಿಸಿದರೆ ಅದು ಒಂದು ವಿಕೃತ ಮನಸ್ಸಿನ ಭಾವವೇ ಹೊರತು ಮತ್ತೇನು ಅಲ್ಲ. ದೇಹಕ್ಕಂಟಿದ ಕೊಳೆಯನ್ನು ಬಲವಾಗಿ ತಿಕ್ಕಿ ಶುಚಿಗೊಳಿಸಬಹುದು. ಹೃದಯದ ಕಲ್ಮಷವನ್ನು ತೊಳೆಯುವುದಕ್ಕೆ ಸನ್ಮಸ್ಸಿನ ಪ್ರೇರಣೆಯಿಂದ ಮಾತ್ರ ಸಾಧ್ಯ. ಇದಕ್ಕೆ ಪಾರಮಾರ್ಥಿಕ ಎನ್ನುವುದು, ನಮ್ಮದಾಗಿ ಏನಿದೆಯೋ ಅದನ್ನು ನಮ್ಮದಲ್ಲ ಎಂದು ತಿಳಿವುದು.

ಯೋಚಿಸೋಣ, ಇದನ್ನೆಲ್ಲ ತಿಳಿಯದ ಅಜ್ಞಾನಿಗಳೇ ನಾವು?



ಕೃಪೆ : http://yakshachintana.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ